ಮೈಸೂರಿನಲ್ಲಿ ರೇವ್ ಪಾರ್ಟಿ : ಪೊಲೀಸರು ದಾಳಿ ನಡೆಸಿ 50ಕ್ಕೂ ಹೆಚ್ಚು ಮಂದಿ ಬಂಧನ
ಮೈಸೂರು ನಗರದ ಹೊರವಲಯದಲ್ಲಿ ತಡರಾತ್ರಿ ನಡೆಯುತ್ತಿದ್ದ ರೇವ್ ಪಾರ್ಟಿಗೆ ಪೊಲೀಸರು ಎಂಟ್ರಿ ಕೊಟ್ಟು ಕಾರ್ಯಾಚರಣೆ ನಡೆಸಿದ್ದು, 50ಕ್ಕೂ ಹೆಚ್ಚು ಯುವಕರನ್ನು ವಶಕ್ಕೆ ಪಡೆದು, ಅವರ ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ಬಂಧಿಸುವ ವೇಳೆ ತಪ್ಪಿಸಿಕೊಳ್ಳಲು ಕೆಲವು ಯುವಕರು ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದಾರೆ. ಓಡಿ ಹೋಗಲು ಯತ್ನಿಸಿದ್ದರು. ಆದರೂ ಪೊಲೀಸರು ತಮ್ಮ ಪಟ್ಟು ಸಡಿಲಿಸದೇ ಅರೆಸ್ಟ್ ಮಾಡಿದ್ದಾರೆ. ಈ ದಾಳಿಯನ್ನು ಅಡಿಷನಲ್ ಎಸ್.ಪಿ ನಾಗೇಂದ್ರ ಹಾಗೂ ಡಿವೈಎಸ್ಪಿ ಕರೀಂ ಅವರ ಟೀಮ್ನಿಂದ ನಡೆಸಲಾಗಿತ್ತು.
ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಎಸ್ಪಿ ವಿಷ್ಣುವರ್ಧನ್ ಅವರು.. ಪಾರ್ಟಿಯಲ್ಲಿ ಯಾವುದೇ ಮಾದಕ ವಸ್ತು ಸಿಕ್ಕಿಲ್ಲ. ಮದ್ಯ, ಸಿಗರೇಟ್ ಸ್ಥಳದಲ್ಲಿ ಇತ್ತು. ಅಲ್ಲಿದ್ದ ಎಲ್ಲರ ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುವುದು. ಎಫ್ಎಸ್ಎಲ್ ತಂಡ ಸಹಾ ಭೇಟಿ ನೀಡಿ ಪರಿಶೀಲನೆ ಮಾಡಿದೆ. ವರದಿ ಬಂದ ನಂತರ ಈ ಬಗ್ಗೆ ಸ್ಪಷ್ಟತೆ ಸಿಗಲಿದೆ ಎಂದಿದ್ದಾರೆ.