ಭಾರತೀಯ ಕ್ರಿಕೆಟ್ ಮಂಡಳಿಯ ಕಾರ್ಯದರ್ಶಿ ಜಯ್ ಶಾ ಅವರು ಐಸಿಸಿಯ ನೂತನ ಅಧ್ಯಕ್ಷರಾಗಿ ಜಯ್ ಶಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪ್ರಸ್ತುತ ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಅವರ ಅಧಿಕಾರಾವಧಿ ನವೆಂಬರ್ 30 ರಂದು ಕೊನೆಗೊಳ್ಳುತ್ತದೆ. ಜಯ್ ಶಾ ಅವರು ಐಸಿಸಿಯ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿದ ಐದನೇ ಭಾರತೀಯರಾಗಿದ್ದಾರೆ.ಇದಕ್ಕೂ ಮೊದಲು ಜಗಮೋಹನ್ ದಾಲ್ಮಿಯಾ, ಎನ್ ಶ್ರೀನಿವಾಸನ್, ಶರದ್ ಪವಾರ್ ಮತ್ತು ಶಶಾಂಕ್ ಮನೋಹರ್ ಅವರು ಐಸಿಸಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.
ಐಸಿಸಿ ನಿಯಮದ ಪ್ರಕಾರ ಅಧ್ಯಕ್ಷರ ಚುನಾವಣೆಯಲ್ಲಿ 16 ಮತಗಳಿದ್ದು, ಈಗ ವಿಜೇತರಿಗೆ 9 ಮತಗಳ ಸರಳ ಬಹುಮತದ ಅಗತ್ಯವಿದೆ. ಈ ಹಿಂದೆ ಅಧ್ಯಕ್ಷರಾಗಲು ಹಾಲಿ ಇರುವವರು ಮೂರನೇ ಎರಡರಷ್ಟು ಬಹುಮತ ಪಡೆಯಬೇಕಿತ್ತು. ಪ್ರಸ್ತುತ ನಿರ್ದೇಶಕರು ಈಗ 27 ಆಗಸ್ಟ್ 2024 ರೊಳಗೆ ಮುಂದಿನ ಅಧ್ಯಕ್ಷರಿಗೆ ನಾಮನಿರ್ದೇಶನಗಳನ್ನು ಸಲ್ಲಿಸಬೇಕು ಮತ್ತು ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳಿದ್ದರೆ, ಚುನಾವಣೆಯನ್ನು ನಡೆಸಲಾಗುವುದು ಮತ್ತು ಹೊಸ ಅಧ್ಯಕ್ಷರ ಅವಧಿಯು 1 ಡಿಸೆಂಬರ್ 2024 ರಿಂದ ಪ್ರಾರಂಭವಾಗುತ್ತದೆ.
ಅವಿರೋಧವಾಗಿ ಆಯ್ಕೆಯಾದ ಬೆನ್ನಲ್ಲೇ ಜಯ್ ಶಾ ಸಂತಸ ಹಂಚಿಕೊಂಡಿದ್ದಾರೆ. ಬಿಸಿಸಿಐ ಕಾರ್ಯದರ್ಶಿಯಾಗಿ ಜವಬ್ದಾರಿ ನಿರ್ವಹಿಸಿದ ನನಗೆ ಇದೀಗ ಅತ್ಯುನ್ನತ ಜವಾಬ್ದಾರಿ ಹೆಗಲೇರಿದೆ. ಕ್ರಿಕೆಟ್‌ನನ್ನು ಮತ್ತಷ್ಟು ಜಾಗತಿಕ ಕ್ರೀಡೆಯನ್ನಾಗಿ ಮಾಡಲು ಶ್ರಮಿಸುತ್ತೇನೆ. ಎಲ್ಲಾ ಮಾದರಿ ಕ್ರಿಕೆಟ್‌ನಲ್ಲಿ ಸಮತೋಲನ ಕಾಪಾಡಿಕೊಳ್ಳುವುದು, ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಕ್ರಿಕೆಟ್ ಮಾದರಿ ಕ್ರೀಡೆಯನ್ನಾಗಿ ಮಾಡುವುದು ಗುರಿಯಾಗಿದೆ. ಕ್ರಿಕೆಟ್ ಜನಪ್ರಿಯತೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವುದೇ ಮೊದಲ ಗುರಿ ಎಂದು ಜಯ್ ಶಾ ಹೇಳಿದ್ದಾರೆ.