ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದಲ್ಲಿ ಪೊಲೀಸರು ಅತುಲ್ ಪತ್ನಿ ನಿಖಿತಾ, ಅತ್ತೆ ನಿಶಾ ಮತ್ತು ಭಾಮೈದ ಅನುರಾಗ್ನನ್ನು ಬಂಧಿಸಿದ್ದಾರೆ. ಅತುಲ್ 15 ದಿನಗಳಿಂದ ಆತ್ಮಹತ್ಯೆಗೆ ಯೋಜಿಸಿದ್ದರು ಮತ್ತು ಡೆತ್ ನೋಟ್ ಬರೆದಿದ್ದರು ಎಂದು ಮೂಲಗಳಿಂದ ಮಾಹಿತಿ ದೊರೆತಿದೆ. ಪತ್ನಿ ಮತ್ತು ಸಂಬಂಧಿಕರಿಂದ ಕಿರುಕುಳಕ್ಕೆ ಒಳಗಾಗಿದ್ದ ಅತುಲ್, ಆತ್ಮಹತ್ಯೆಗೆ ಮುನ್ನ 90 ನಿಮಿಷಗಳ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಬೆಂಗಳೂರು : -ಉತ್ತರ ಪ್ರದೇಶ ಮೂಲದ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರತ್ತಹಳ್ಳಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಅತುಲ್ ಪತ್ನಿ, ಎ1 ನಿಖಿತಾ ಸಿಂಘಾನಿಯ, ಆತುಲ್ ಅತ್ತೆ, ಎ2 ನಿಶಾ ಸಿಂಘಾನಿಯಾ, ಭಾಮೈದ ಎ3 ಅನುರಾಗ್ನನ್ನು ಪೊಲೀಸರು ಬಂಧಿಸಿ ತಡರಾತ್ರಿ ಬೆಂಗಳೂರಿಗೆ ಕರೆತಂದಿದ್ದಾರೆ. ಹರಿಯಾಣದ ಗುರುಗ್ರಾಮದಲ್ಲಿ ಅತುಲ್ ಪತ್ನಿ ನಿಖಿತಾಳನ್ನು ಬಂಧಿಸಲಾಗಿದ್ದು, ಉತ್ತರ ಪ್ರದೇಶದ ಅಲಹಾಬಾದ್ನಲ್ಲಿ ನಿಶಾ ಹಾಗೂ ಅನುರಾಗ್ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೂವರನ್ನೂ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಎಲ್ಲರಿಗೂ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪತಿ ಆತ್ಮಹತ್ಯೆ ಬಳಿಕ ನಿಖಿತಾ ಪರಾರಿಯಾಗಿದ್ದರು. ಹುಡುಕಾಟ ಆರಂಭಿಸಿದ್ದ ಮಾರತ್ತಹಳ್ಳಿ ಪೊಲೀಸರು ಮೂರು ದಿನದ ಒಳಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದರು.
ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಮಾರತ್ತಹಳ್ಳಿ ಪೊಲೀಸರಿಗೆ ಹಲವು ವಿಚಾರಗಳು ಗೊತ್ತಾಗಿವೆ. ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಳ್ಳಲು 15 ದಿನಗಳ ಹಿಂದೆಯೇ ನಿರ್ಧರಿಸಿದ್ದರು. ಆತ್ಮಹತ್ಯೆಗೂ ಮುನ್ನ ಮೂರು ದಿನದ ಹಿಂದೆ ಡೆತ್ ನೋಟ್ ಬರೆದಿಟ್ಟಿದ್ದರು. ಅಲ್ಲದೇ, ಕಾನೂನಿನ ವಿಚಾರಗಳ ಬಗ್ಗೆ ಗೂಗಲ್ನಲ್ಲಿ ಸರ್ಚ್ ಮಾಡಿದ್ದರು ಎಂದು ಪೊಲೀಸರು ತನಿಖೆಯಲ್ಲಿ ಕಂಡುಕೊಂಡಿದ್ದಾರೆ.
ಆತಹತ್ಯೆ ಪ್ರಕರಣಗಳು, ವಿಡಿಯೋ ಫುಟೇಜ್ಗಳ ಬಗ್ಗೆ ಹೆಚ್ಚು ಹುಡುಕಾಡಿದ್ದರು. ಮೂರು ದಿನಗಳ ಕಾಲ ಪ್ಲಾಟ್ನಲ್ಲೇ ಕುಳಿತು ಸುದೀರ್ಘವಾಗಿ ಡೆತ್ ನೋಟ್ ಬರೆದಿದ್ದರು. ಡೆತ್ನೋಟ್ ಬರೆದ ಬಳಿಕ ವಿಡಿಯೋ ರೆಕಾರ್ಡ್ ಮಾಡಿದ್ದರು. ಅಲ್ಲದೇ, ಎಕ್ಸ್ ಪೋಸ್ಟ್ಗಳನ್ನು ಶೇರ್ ಮಾಡುವ ವಿಧಾನದ ಬಗ್ಗೆಯೂ ತಿಳಿದುಕೊಂಡಿದ್ದರು. ಅಮೇರಿಕಾ ಅಧ್ಯಕ್ಷ ಟ್ರಂಪ್ ಐಡಿ, ಭಾರತದ ರಾಷ್ಟ್ರಪತಿಗಳ ಐಡಿಗಳನ್ನೂ ಇಂಟರ್ನೆಟ್ ಮೂಲಕ ಪಡೆದಿದ್ದರು. ಹಾಗೇ, ಯಾವ ಸಮಯಕ್ಕೆ ಏನೇನು ಮಾಡಬೇಕು ಎಂದು ಪಟ್ಟಿ ಮಾಡಿಕೊಂಡಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವ ಕೆಲ ಕ್ಷಣಗಳ ಮುಂಚೆಯಷ್ಟೇ ಎನ್ಜಿಒ ಗ್ರೂಪ್ಗೆ ವಿಡಿಯೋ ಮಾಹಿತಿ ಶೇರ್ ಮಾಡಿದ್ದರು ಎಂದು ಪೊಲೀಸರಿಗೆ ತನಿಖೆಯಿಂದ ತಿಳಿದುಬಂದಿದೆ. ಸದ್ಯ ಪೊಲೀಸರು ಆತುಲ್ ಸುಭಾಷ್ ಅವರ ಸಹದ್ಯೋಗಿಗಳ ಬಳಿ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಪತ್ನಿ ಕಿರುಕುಳಕ್ಕೆ ಬೇಸತ್ತು ಟೆಕ್ಕಿ ಅತುಲ್ ಸುಭಾಷ (34 ವರ್ಷ) ಡೆತ್ನೋಟ್ ಬರೆದಿಟ್ಟು ಡಿಸೆಂಬರ್ 9ರಂದು ಬೆಂಗಳೂರಿನ ಮಂಜುನಾಥ ಲೇಔಟ್ನ ಪ್ಲಾಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ ತನಗೆ ಪತ್ನಿ ಮತ್ತು ಆಕೆಯ ಸಂಬಂಧಿಕರು ನೀಡಿರುವ ಕಿರುಕುಳದ ಬಗ್ಗೆ 90 ನಿಮಿಷಗಳ ವಿಡಿಯೋ ಮಾಡಿ, ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಹರಿಬಿಟ್ಟಿದ್ದಾರೆ. ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅತುಲ್ ಸುಭಾಷ ಆತ್ಮಹತ್ಯೆ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ಅಲ್ಲದೇ ಪ್ರಕರಣ ಸುಪ್ರೀಂ ಕೋರ್ಟ್ನಲ್ಲೂ ಪ್ರಸ್ತಾಪವಾಗಿತ್ತು.