ತಮಿಳುನಾಡು: ಬುಧವಾರ ರಾತ್ರಿಯಿಂದ ಆರಂಭವಾದ ಭಾರೀ ಮಳೆಯಿಂದಾಗಿ ತಮಿಳುನಾಡು ಸರ್ಕಾರ ಚೆನ್ನೈ ಮತ್ತು ಸಮೀಪದ ಜಿಲ್ಲೆಗಳಲ್ಲಿ ಶಾಲೆಗಳಿಗೆ ಗುರುವಾರ ರಜೆ ಘೋಷಿಸಿದೆ. ವಿಲ್ಲುಪುರಂ, ತಂಜಾವೂರು, ಮೈಲಾಡುತುರೈ, ರಾಮನಾಥಪುರಂ, ದಿಂಡಿಗಲ್, ಕಡಲೂರು ಮತ್ತು ಪುದುಕ್ಕೊಟ್ಟೈ ಜಿಲ್ಲಾಧಿಕಾರಿಗಳು ಶಾಲೆಗಳಿಗೆ ರಜೆ ನೀಡಿ ಆದೇಶ ಹೊರಡಿಸಿದ್ದಾರೆ.
ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲೂ ಗುರುವಾರ ಮಳೆ ಪೀಡಿತ ಪ್ರದೇಶದ ಶಾಲೆಗಳು ಮತ್ತು ಕಾಲೇಜುಗಳಿಗೆ ರಜೆ ಘೋಷಿಸಿದೆ. ಶ್ರೀಲಂಕಾ ಕರಾವಳಿಯ ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಪ್ರಸ್ತುತ ಕಡಿಮೆ ಒತ್ತಡದ ಪ್ರದೇಶ ಉಂಟಾಗಿದೆ ಎಂದು ಗುರುತಿಸಲಾಗಿದೆ. ಮುಂದಿನ 24 ಗಂಟೆಗಳಲ್ಲಿ ಪಶ್ಚಿಮ-ವಾಯುವ್ಯದ ಕಡೆಗೆ ಶ್ರೀಲಂಕಾ-ತಮಿಳುನಾಡು ಕರಾವಳಿಯ ಕಡೆಗೆ ಚಂಡಮಾರುತವು ಚಲಿಸುವ ನಿರೀಕ್ಷೆಯಿದೆ.
ಇದರಿಂದ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಚೆನ್ನೈ, ತಿರುವಳ್ಳೂರು, ಕಾಂಚೀಪುರಂ, ಚೆಂಗಲ್‌ಪಟ್ಟು, ತಿರುವಣ್ಣಾಮಲೈ, ವಿಲ್ಲುಪುರಂ, ಕಲ್ಲಕುರಿಚಿ, ಕಡಲೂರು, ಪೆರಂಬಲೂರ್, ತಿರುಚ್ಚಿ, ಶಿವಗಂಗಾ, ರಾಮನಾಥಪುರಂ, ಮೈಲಾಡುತುರೈ, ನಾಗಪಟ್ಟಿಣಂ, ಕೊಯಮತ್ತೂರು, ತಿರುಪುರ್, ಕರೂರ್, ಥೇಣಿ, ದಿಂಡಿಗಲ್, ಮಧುರೈ, ವಿರುದುಕುಡಿನಗರ, ಟಿ.ವಿರುದುಕುಡಿನಗರ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಕೆಲವು ಜಿಲ್ಲೆಗಳಿಗೆ ಯೆಲ್ಲೋ- ಆರೇಂಜ್ ಅಲರ್ಟ್ ಘೋಷಣೆ
ಪ್ರಾದೇಶಿಕ ಹವಾಮಾನ ಕೇಂದ್ರ (RMC) ಗುರುವಾರ ತಮಿಳುನಾಡಿನ ಹಲವಾರು ಜಿಲ್ಲೆಗಳಿಗೆ ಆರೆಂಜ್ ಹಾಗೂ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಬುಧವಾರ, ಚೆನ್ನೈ ಮತ್ತು ಅಕ್ಕಪಕ್ಕದ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗಿದ್ದು, ಮುಂದಿನ 24 ಗಂಟೆಗಳಲ್ಲಿ ಇದು ಮುಂದುವರಿಯುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತನ್ನ ಪ್ರಕಟಣೆಯಲ್ಲಿ ಮಾಹಿತಿ ಒದಗಿಸಿದೆ.