ಕೊಡಗಿನಲ್ಲಿ ಭಾರೀ ಮಳೆ ತುಂಬಿದ ಹನಗೋಡು ಅಣೆಕಟ್ಟೆ
ಹನಗೋಡು: ಕೊಡಗಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಲಕ್ಷ್ಮಣತೀರ್ಥ ನದಿಯಲ್ಲಿ ಒಳ ಹರಿವು ಹೆಚ್ಚುತ್ತಿದ್ದು, ಹನಗೋಡು ಅಣೆಕಟ್ಟೆ ಮೇಲೆ 2500 ಕ್ಯೂಸೆಕ್ಸ್ ನೀರು ಹರಿಯುತ್ತಿದೆ. ಮಳೆಯಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಕಳೆದ ಮೂರು ದಿನಗಳಿಂದ ಲಕ್ಷ್ಮಣತೀರ್ಥ ನದಿ ಹುಟ್ಟುವ ಇರ್ಪು ಸೇರಿದಂತೆ ಸುತ್ತಮುತ್ತ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸುರಿಯುತ್ತಿರುವ ಸತತ ಮಳೆಯಿಂದಾಗಿ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಎರಡೇ ದಿನದಲ್ಲಿ ಲಕ್ಷ್ಮಣತೀರ್ಥ ನದಿಯ ಹನಗೋಡು ಅಣೆಕಟ್ಟೆ ತುಂಬಿ ಸುಮಾರು ಎರಡೂವರೆ ಅಡಿಯಷ್ಟು ನೀರು ಹರಿಯುತ್ತಿದೆ. ಶೀಘ್ರದಲ್ಲೇ ಮುಖ್ಯ ಕಾಲುವೆಗೆ ನೀರು ಹರಿಸಿ ಕೆರೆಗಳಿಗೆ ನೀರು ತುಂಬಿಸಲಾಗುವುದೆಂದು ಹಾರಂಗಿ ಹನಗೋಡು ಉಪ ವಿಭಾಗದ ಎಇಇ ಅಶೋಕ್ ತಿಳಿಸಿದ್ದಾರೆ.