ಮಹಿಳಾ ವೈದ್ಯರಿಗೆ ಲೈಂಗಿಕ ಕಿರುಕುಳ ಮತ್ತು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಆರೋಪದ ಮೇಲೆ ವೈದ್ಯನ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣವನ್ನು ರದ್ದು ಪಡಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.
ಕುಂದಾಪುರದ ತಾಲೂಕು ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರಾಬರ್ಟ್ ರೆಬೆಲ್ಲೋ ಅವರು ತಮ್ಮ ವಿರುದ್ಧ ಕುಂದಾಪುರ ಪೊಲೀಸ್ ಠಾಣೆಯ ಪೊಲೀಸರು ದಾಖಲಿಸಿರುವ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್ಗೆ ಮೊರೆ ಹೋಗಿದ್ದರು. ಆದರೆ ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪ್ರಕರಣ ಕೈಬಿಡಲು ನಿರಾಕರಿಸಿದೆ.
ಹಾಗೆಯೇ ಡಾ. ರಾಬರ್ಟ್ ರೆಬೆಲ್ಲೋ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಪೀಠ, ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡುವ ಆರೋಪ ಗಂಭೀರವಾಗಿದ್ದು, ಅಂತಹ ಆರೋಪಿ ವೈದ್ಯರನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಪ್ರಕರಣದ ಸಂಬಂಧ ಪೊಲೀಸರು ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸಲಿ. ಆ ಬಳಿಕ ಆರೋಪಿ ವೈದ್ಯರು ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಪೀಠ ಸೂಚಿಸಿದ್ದು, ಈ ಹಿನ್ನೆಲೆಯಲ್ಲಿ ಅರ್ಜಿದಾರರು ತಮ್ಮ ಅರ್ಜಿಯನ್ನು ವಾಪಸ್ ಪಡೆದುಕೊಂಡರು. ಅಲ್ಲದೆ ಮೇಲ್ನೋಟಕ್ಕೆ ದಾಖಲೆಗಳನ್ನು ಪರಿಶೀಲಿಸಿದರೆ, ಅರ್ಜಿದಾರ ವೈದ್ಯ ದೂರುದಾರ ಮಹಿಳಾ ವೈದ್ಯರಿಗೆ ಲೈಂಗಿಕ ಕಿರುಕುಳ ನೀಡಿರುವುದು ಕಂಡುಬರುತ್ತಿದೆ. ಈ ಹಂತದಲ್ಲಿ ಎಫ್ ಐಆರ್ ಅನ್ನು ರದ್ದುಪಡಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿದರು.
ಮಧ್ಯರಾತ್ರಿ ಕರೆ ಮಾಡಿ ಊಟಕ್ಕೆ ಕರೆದಿದ್ದ ವೈದ್ಯ.
ಇನ್ನು ಆರೋಪಿ ವೈದ್ಯ ತನ್ನ ಮಹಿಳಾ ಸಹೋದ್ಯೋಗಿ ವೈದ್ಯರಿಗೆ ಮಧ್ಯರಾತ್ರಿ ಕರೆ ಮತ್ತು ಸಂದೇಶ ಕಳುಹಿಸಿ ಊಟಕ್ಕೆ ಕರೆದಿದ್ದಾರೆ. ಜೊತೆಗೆ ವೀಡಿಯೋ ಕಾಲ್ ಮಾಡಿ ಮಹಿಳಾ ವೈದ್ಯರಿಗೆ ಕಿರುಕುಳ ನೀಡಿದ್ದಾರೆ ಎಂಬುದಾಗಿ ದೂರಲಾಗಿತ್ತು. ಈ ಬಗ್ಗೆ ಪೊಲಿಸರು ಎಫ್ ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಆದರೆ, ತಾವು ಯಾವುದೇ ಅಪರಾಧ ಎಸಗಿಲ್ಲ. ಕೇವಲ ಔಪಚಾರಿಕ ಸಂದೇಶ ಕಳುಹಿಸಿರುವುದಾಗಿ ಅರ್ಜಿದಾರರು ವಾದಿಸಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಪೀಠ, ನೀವು ಯಾವ ಸಂದೇಶ ಕಳಿಸಿದ್ದೀರಾ ಎಂಬ ದಾಖಲೆಗಳು ಕೋರ್ಟ್ ಮುಂದಿದೆ. ತಡರಾತ್ರಿ ಊಟಕ್ಕೆ ಬರುವಂತೆ ದೂರುದಾರರಿಗೆ ಏಕೆ ಹೇಳುತ್ತಿದ್ದೀರಿ. ಅರ್ಜಿದಾರರು ಸರ್ಕಾರಿ ನೌಕರ. ಸರ್ಕಾರಿ ಅಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವವರು.. ಸಿಬ್ಬಂದಿಯನ್ನು ಲೈಂಗಿಕವಾಗಿ ಕಿರುಕುಳ ನೀಡುವ ವೈದ್ಯರನ್ನು ಬಿಡಲು ಸಾಧ್ಯವೇ ಇಲ್ಲ. ದೋಷಾರೋಪ ಪಟ್ಟಿ ಸಲ್ಲಿಸಿದ ನಂತರ ಎಲ್ಲ ಸಂಗತಿಗಳು ತಿಳಿದು ಬರಲಿದೆ ಎಂದು ಹೇಳಿ ಪ್ರಕರಣ ರದ್ದುಗೊಳಿಸಲು ನಿರಾಕರಿಸಿತು.