ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಿರಿಯಾಪಟ್ಟಣ ಜೆಡಿಎಸ್ ಮಾಜಿ ಶಾಸಕ ಕೆ. ಮಹದೇವ್ ಅವರ ಪುತ್ರ ಪಿ.ಎಂ. ಪ್ರಸನ್ನ ಅವರು ಮೈಮುಲ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಚಿವ ಕೆ ವೆಂಕಟೇಶ್ ಅವರ ಕಿರುಕುಳಕ್ಕೆ ಬೇಸತ್ತು ಪ್ರಸನ್ನ ಅವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.
ಸಚಿವ ಕೆ.ವೆಂಕಟೇಶ್ ಅವರು 6 ತಿಂಗಳಲ್ಲಿ 24 ನೋಟಿಸ್ ಕೊಟ್ಟು ಕಿರುಕುಳ ನೀಡುತ್ತಿದ್ದಾರೆ ಎಂದು ಇತ್ತೀಚೆಗಷ್ಟೇ ಗುಡ್ ನ್ಯೂಸ್ ಕನ್ನಡ ವಾಹಿನಿಯೊಂದಿಗೆ ಮಾತನಾಡಿ ಪ್ರಸನ್ನ ಅವರು ಆರೋಪಿಸಿದ್ದರು. ಅಲ್ಲದೇ ಸಚಿವರು ತಮ್ಮ ಪುತ್ರನ ಭವಿಷ್ಯಕ್ಕಾಗಿ ಕಿರುಕುಳ ನೀಡಿದ್ದಾರೆ ಎಂದು ಕಳೆದ ವಾರ ಅಷ್ಟೇ ಬಹಿರಂಗವಾಗಿ ಆರೋಪ ಮಾಡಿದ್ದರು. ಇದರ ಬೆನ್ನಲ್ಲೇ ಇದೀಗ ಪ್ರಸನ್ನ ಅವರು ದಿಢೀರ್ ಅಂತ ತಮ್ಮ ಮೈಮುಲ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.