ಉಪ ಚುನಾವಣೆ ರಾಜಕೀಯ ಕಾವೇರಿರುವ ಹೊತ್ತಲ್ಲೇ ಮುಡಾ ಹಗರಣದ ತನಿಖೆಗೆ ಮಹತ್ವದ ಘಟ್ಟ ತಲುಪಿದೆ. ನಿರೀಕ್ಷೆಗಿಂತ ವೇಗವಾಗಿ ಲೋಕಾಯುಕ್ತ ತನಿಖೆ ನಡೀತಿದೆ. ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರನ್ನು ಮೈಸೂರು ಲೋಕಾಯುಕ್ತ ಎಸ್ಪಿ ವಿಚಾರಣೆಗೆ ಒಳಪಡಿಸಿದ್ದಾರೆ. ಸುಮಾರು ಮೂರು ಗಂಟೆಗಳ ಕಾಲ ಅವರು ವಿಚಾರಣೆ ಎದುರಿಸಿದ್ದಾರೆ.
ಲೋಕಾಯುಕ್ತ ಪೊಲೀಸರು ಸಮನ್ಸ್ ನೀಡಿದ ಹಿನ್ನೆಲೆಯಲ್ಲಿಂದು ಸಿಎಂ ಪತ್ನಿ ವಿಚಾರಣೆಗೆ ಹಾಜರಾಗಿದ್ರು. ಗೌಪ್ಯ ಸ್ಥಳದಲ್ಲಿ ಸಿಎಂ ಪತ್ನಿಯನ್ನು ಮೂರು ಗಂಟೆಗಳ ಕಾಲ ಲೋಕಾಯುಕ್ತ ಎಸ್ಪಿ ವಿಚಾರಣೆ ಮಾಡಿದ್ದಾರೆ. ವಿವಾದಿತ ಜಮೀನು ಮತ್ತು 14 ಸೈಟ್ಗಳ ಖರೀದಿ ವಿಚಾರವಾಗಿ ಹತ್ತಾರು ಪ್ರಶ್ನೆಗಳನ್ನು ಲೋಕಾಯುಕ್ತ ಎಸ್ಪಿ ಕೇಳಿದ್ದಾರೆ. ಇದಕ್ಕೆ ತಮ್ಮಲ್ಲಿರುವ ಮಾಹಿತಿಯನ್ನು ಸಿಎಂ ಪತ್ನಿ ನೀಡಿದ್ದಾರೆ ಎಂದು ತಿಳಿದುಬಂದಿದೆ.