9 ಸಾವಿರ ಮಂದಿ ವೈದ್ಯ ಸಂಪತ್ತನ್ನು ಸೃಷ್ಟಿಸಿದ ಶತಮಾನದ ಕಾಲೇಜು : ಸಿಎಂ ಸಿದ್ದರಾಮಯ್ಯ ಪ್ರಶಂಸೆ
ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಶತಮಾನೋತ್ಸವದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ, ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಶತಮಾನ ಕಂಡ ಮೈಸೂರು ವೈದ್ಯಕೀಯ ಕಾಲೇಜು 9 ಸಾವಿರ ಮಂದಿ ವೈದ್ಯ ಸಂಪತ್ತನ್ನು ಸೃಷ್ಟಿಸಿದ ಹೆಗ್ಗಳಿಕೆ ಹೊಂದಿದೆ. ಪ್ರಪಂಚದಾದ್ಯಂತ ಈ ಕಾಲೇಜಿನಲ್ಲಿ ಕಲಿತ ವೈದ್ಯರು ವಿಸ್ತರಿಸಿಕೊಂಡಿದ್ದಾರೆ ಎಂದರು.
ಖಾಸಗಿ ಆಸ್ಪತ್ರೆಗಳಿಗಿಂತ ಸರ್ಕಾರಿ ಆಸ್ಪತ್ರೆಗಳ ವೈದ್ಯರಿಗೆ ಹೆಚ್ಚು ಪರಿಣಿತಿ ಮತ್ತು ಅನುಭವ ಇರುತ್ತದೆ ಎನ್ನುವುದು ನನ್ನ ಭಾವನೆ. ಸರ್ಕಾರಿ ಆಸ್ಪತ್ರೆಗೆ ಬರುವವರು ಹೆಚ್ಚಿನವರು ಬಡವರು. ಇವರು ವೈದ್ಯರನ್ನು ದೇವರಂತೆ ಕಾಣುತ್ತಾರೆ ಎಂದರು.ವೈದ್ಯಕೀಯ ಕ್ಷೇತ್ರದ್ದು ಎರಡು ರೀತಿಯ ಜವಾಬ್ದಾರಿ ಇದೆ. ರೋಗ ಬಂದ ನಂತರ ಚಿಕಿತ್ಸೆ ಕೊಡುವುದು ಮತ್ತು ರೋಗ ಬರದಂತೆ ತಡೆಯುವುದೂ ಕೂಡ ವೈದ್ಯಕೀಯ ಕ್ಷೇತ್ರದ ಜವಾಬ್ದಾರಿ ಆಗಿದೆ ಎಂದರು.
ವೈದ್ಯರು ಸಮಾಜದ ಆಸ್ತಿ. ಇನ್ನೂ ಹೆಚ್ಚಿನ ವೈದ್ಯರು ಈ ಕಾಲೇಜಿನಿಂದ ಹೊರಗೆ ಬಂದು ಜನರ ಆಸ್ತಿ ಆಗಲಿ. ಸೇವೆ, ಶುಚಿತ್ವ ಮತ್ತು ಗುಣಮಟ್ಟದಲ್ಲಿ ಯಾವುದಕ್ಕೂ ಕಡಿಮೆ ಇಲ್ಲದಂತೆ ಮೈಸೂರು ವೈದ್ಯಕೀಯ ಕಾಲೇಜು ಪ್ರಗತಿ ಕಾಣಲಿ ಎಂದು ಹಾರೈಸಿದರು. ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಸಿ.ಮಹದೇವಪ್ಪ, ವೈದ್ಯಕೀಯ ಶಿಕ್ಷಣ ಸಚಿವರರಾದ ಶರಣ ಪ್ರಕಾಶ್ ಪಾಟೀಲ್, ಶಾಸಕರುಗಳಾದ ತನ್ವೀರ್ ಸೇಠ್, ಹರೀಶ್ ಗೌಡ, ಡಾ.ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯರಾದ ಡಾ.ತಿಮ್ಮಯ್ಯ, ಹಿರಿಯ ಐಪಿಎಸ್ ಅಧಿಕಾರಿ ಬೋರಲಿಂಗಯ್ಯ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.