ಭಾರತದ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ನ್ಯೂಜಿಲೆಂಡ್ 3-0 ಅಂತರದಿಂದ ಗೆದ್ದುಕೊಂಡಿದೆ. 3ನೇ ಪಂದ್ಯದಲ್ಲಿ 25 ರನ್ಗಳ ರೋಚಕ ಜಯ ಸಾಧಿಸಿದೆ. ಭಾರತ ತಂಡವು ಟೆಸ್ಟ್ ಕ್ರಿಕೆಟ್ ಆಡಲು ಶುರುವಾಗಿ ಬರೋಬ್ಬರಿ 92 ವರ್ಷಗಳು ಕಳೆದಿವೆ. ಆದರೆ ತವರಿನಲ್ಲಿ ಒಮ್ಮೆಯೂ 3 ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ಸೋತಿರಲಿಲ್ಲ. ಆದರೆ ಈ ಬಾರಿ ಭಾರತ ತಂಡವನ್ನು ತವರಿನಲ್ಲಿ ಬಗ್ಗು ಬಡಿದು ನ್ಯೂಜಿಲೆಂಡ್ ಹೊಸ ಇತಿಹಾಸ ರಚಿಸಿದೆ.
ಭಾರತ ತಂಡವು ತವರಿನಲ್ಲಿ ಕೊನೆಯ ಬಾರಿ ವೈಟ್ ವಾಶ್ ಸೋಲು ಎದುರಿಸಿದ್ದು 2000 ರಲ್ಲಿ. ಅಂದು ಸೌತ್ ಆಫ್ರಿಕಾ ತಂಡವು ಭಾರತವನ್ನು 2-0 ಅಂತರದಿಂದ ಮಣಿಸಿ ಇತಿಹಾಸ ಬರೆದಿತ್ತು. ಇದೀಗ 24 ವರ್ಷಗಳ ಬಳಿಕ ಕಿವೀಸ್ ಪಡೆ ಭಾರತ ತಂಡಕ್ಕೆ ಮತ್ತೆ ವೈಟ್ ವಾಶ್ ಸೋಲಿನ ರುಚಿ ತೋರಿಸಿದೆ. ಇದೀಗ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿಯೇ ಅವಮಾನಕರ ರೀತಿಯಲ್ಲಿ ಸೋಲುಂಡಿರುವ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ ಸಜ್ಜಾಗಬೇಕಿದೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಈ ಸರಣಿಯು ನವೆಂಬರ್ 22 ರಿಂದ ಶುರುವಾಗಲಿದ್ದು, ಈ ಸರಣಿಯ ಮೂಲಕ ಟೀಮ್ ಇಂಡಿಯಾ ಕಂಬ್ಯಾಕ್ ಮಾಡಲಿದೆಯಾ ಕಾದು ನೋಡಬೇಕಿದೆ.