ಇನ್ನು ಕಂಡ ಕಂಡವರು ಸದಸ್ಯರಾಗುವಂತಿಲ್ಲ; ಸರ್ಕಾರದಿಂದ ಮೂರಾಲ್ಕು ಮಂದಿ ನಾಮನಿರ್ದೇಶನ
ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ
ಬೆಳಗಾವಿ ಅಧಿವೇಶನದಲ್ಲೇ ಮಸೂದೆ ಮಂಡನೆ ನಿರ್ಧಾರ
ಬೆಂಗಳೂರು, ಡಿ.14(ಕೆಎಂಶಿ)-ಭ್ರಷ್ಟಾಚಾರ ಹಗರಣಗಳ ಕೇಂದ್ರಬಿಂದು ಆಗಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ಕ್ಕೆ ಬಿಡಿಎ ಮಾದರಿಯಲ್ಲಿ ಪ್ರತ್ಯೇಕ ಕಾಯ್ದೆ ರೂಪಿಸಲು ಸರ್ಕಾರ ತೀರ್ಮಾನಿಸಿದೆ.ಬೆಳಗಾವಿಯ ಸುವರ್ಣಸೌಧದಲ್ಲಿ ನಿನ್ನೆ ರಾತ್ರಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಂಡಿರುವ ಸರ್ಕಾರ, ಚಳಿಗಾಲದ ಅಧಿವೇಶನದಲ್ಲೇ ಮಸೂದೆ ಮಂಡನೆ ಮಾಡಿ ಅಂಗೀಕಾರ ಪಡೆಯಲು ಸಮ್ಮತಿಸಿದೆ. ಕಾಯ್ದೆ ಜಾರಿಗೊಂಡ ನಂತರ ಭೂಸ್ವಾಧೀನ, ನಕ್ಷೆ, ನಿವೇಶನ ಹಂಚಿಕೆ ಸೇರಿದಂತೆ ಎಲ್ಲಾ ಕಾರ್ಯಗಳು ಬಿಡಿಎ ಮಾದರಿಯಲ್ಲೇ ನಡೆಯಲಿವೆ. ಭೂಸ್ವಾಧೀನ ನಂತರ ಮಾಲೀಕರಿಗೆ ಶೇ.50 ಇಲ್ಲವೇ 40ರಷ್ಟು ನಿವೇಶನ ಹಂಚಿಕೆ ಹಾಗೂ ಬೇಕಾಬಿಟ್ಟಿ ಬಿಡಿ ನಿವೇಶನಗಳನ್ನು ಹಂಚಿಕೆ ಮಾಡುವ ಸ್ವಾತಂತ್ರ್ಯಕ್ಕೆ ಕಡಿವಾಣ ಬೀಳಲಿದೆ. ಅಷ್ಟೇ ಅಲ್ಲ, ಪ್ರಾಧಿಕಾರಕ್ಕೆ ಕೇವಲ ಮೂರರಿಂದ ನಾಲ್ಕು ಮಂದಿ ನಾಮನಿರ್ದೇಶನ ಸದಸ್ಯರಿರುತ್ತಾರೆ.
ಈ ಮೊದಲು ಮುಡಾಕ್ಕೆ ನಾಮನಿರ್ದೇಶಿತರ ಸಂಖ್ಯೆ ಅಧಿಕವಿತ್ತು. ನಗರಾಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮುಡಾಕ್ಕೆ ಇನ್ನು ಮುಂದೆ ಬಿಗಿಯಾದ ಕಾನೂನಿನ ಕುಣಿಕೆ ಬೀಳಲಿದೆ. ಮುಡಾ 1987ರ ಕಾಯ್ದೆಯಡಿ ಕಾರ್ಯನಿರ್ವ ಹಿಸುತ್ತಿತ್ತು. ಮಸೂದೆಗೆ ಅನುಮತಿ ದೊರೆಯುತಿ ದ್ದಂತೆ ಎಲ್ಲವನ್ನೂ ಹೊಸ ಕಾಯ್ದೆಯಡಿಯಲ್ಲೇ ನಿರ್ವಹಿಸಬೇಕಾಗುತ್ತದೆ. ಪ್ರಾಧಿಕಾರ ಇದುವರುಮೈಸೂರು ನಗರದಲ್ಲಿ ಅನೇಕ ಹೊಸ ಹೊಸ ಬಡಾವಣೆ ಗಳನ್ನು ನಿರ್ಮಿಸಿ, ನಿವೇಶನಗಳನ್ನು ಹಂಚಿಕೆ ಮಾಡಿದೆ. ಆದರೆ, ಸಾವಿರಾರು ಬಿಡಿ ನಿವೇಶನಗಳನ್ನು ಆಡಳಿತ ಮಂಡಳಿಯೊಂದಿಗೆ ಅಧಿಕಾರಿಗಳು ಶಾಮೀಲಾಗಿ ಬೇಕಾ ಬಿಟ್ಟಿ ಹಂಚಿ, ಮುಡಾಗೆ ಸಾವಿರಾರು ಕೋಟಿ ರೂ. ನಷ್ಟ, ಉಂಟು ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬ ಅಭಿವೃದ್ಧಿ ಹೊಂದಿದ ಬಡಾವಣೆಯಲ್ಲಿ 14 ನಿವೇಶನಗಳನ್ನು ತಮ್ಮ ಜಮೀನಿನ ಸ್ವಾಧೀನಕ್ಕೆ ಬದಲಾಗಿ 4 ಪಡೆದುಕೊಂಡಿದ್ದೇ ಪ್ರಾಧಿಕಾರದಲ್ಲಿ ನಡೆದಿರುವ ಭ್ರಷ್ಟಾಚಾರಗಳು ಬಯಲಿಗೆ ಬರಲು ಕಾರಣವಾಗಿದ್ದು, ಈ ಬೆಳವಣಿಗೆ ನಂತರ ರಾಜಭವನ ಮಧ್ಯೆ ಪ್ರವೇಶಿಸಿ ನ್ಯಾಯಾಲಯದ ಆದೇಶದಂತೆ ತನಿಖೆಯೂ ನಡೆದಿದೆ. ಇದರ ನಡುವೆ ಜಾರಿ ನಿರ್ದೇಶನಾಲಯ ಪ್ರತ್ಯೇಕ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ಸರ್ಕಾರದ ಮಟ್ಟದಲ್ಲಿ ದೊಡ್ಡ ಸಂಚಲನ ಉಂಟಾಗಲಿದೆ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿವೆ