ಧಾರವಾಡ: ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ನೇಮಕಾತಿ ಪರೀಕ್ಷೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿರುವ ಆರೋಪ ಕೇಳಿಬಂದಿದೆ. ಧಾರವಾಡದಲ್ಲಿ ಪ್ರಶ್ನೆ ಪತ್ರಿಕೆಗಳ ಮೇಲಿನ ಸೀಲ್ ಓಪನ್ ಮಾಡಲಾಗಿದೆ ಎಂದು ಆರೋಪಿಸಲಾಗಿದ್ದು, ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅಭ್ಯರ್ಥಿಗಳು ಮರು ಪರೀಕ್ಷೆಗೆ ಆಗ್ರಹಿಸಿದ್ದಾರೆ.
ಧಾರವಾಡ, ಡಿಸೆಂಬರ್ 12: ಪಿಡಿಒ ನೇಮಕಾತಿಗೆ ಸಂಬಂಧಿಸಿ ಡಿಸೆಂಬರ್ 8ರಂದು ನಡೆದಿದ್ದ ಪರೀಕ್ಷೆಯಲ್ಲೂ ಅಕ್ರಮ ನಡೆದಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ. ಪ್ರಶ್ನೆ ಪತ್ರಿಕೆ ಸೀಲ್ ಓಪನ್ ಮಾಡಿರುವ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಪ್ಪಿತಸ್ಥರನ್ನು ಶಿಕ್ಷಿಸಿ ಮರುಪರೀಕ್ಷೆಗೆ ಆದೇಶ ನೀಡಬೇಕೆಂಬ ಆಗ್ರವೂ ವ್ಯಕ್ತವಾಗಿದೆ. ಇದರೊಂದಿಗೆ, ಈ ಸಲವೂ ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಕೆಪಿಎಸ್‌ಸಿ ವಿಫಲವಾಯ್ತಾ ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ.
ಧಾರವಾಡದ ಕೆಎನ್‌ಕೆ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳ ಕೈ ಸೇರುವ ಮೊದಲೇ ಪ್ರಶ್ನೆ ಪತ್ರಿಕೆ ಸೀಲ್ ಓಪನ್ ಮಾಡಲಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಸಾಮಾನ್ಯ ಜ್ಞಾನ ವಿಷಯಕ್ಕೆ ಸಂಬಂಧಪಟ್ಟ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು ಎನ್ನಲಾಗಿದೆ.
ಪಿಡಿಒ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸಾಮಾನ್ಯವಾಗಿ ಮೂರು ಹಂತದ ಸೀಲ್ ಭದ್ರತೆ ಹೊಂದಿರುತ್ತವೆ. ಪರೀಕ್ಷಾ ಕೇಂದ್ರದ ಪ್ರಶ್ನೆ ಪತ್ರಿಕೆಗಳ ಬಂಡಲ್‌ಗೆ ಸಮಗ್ರವಾಗಿ ಪ್ಲಾಸ್ಟಿಕ್ ಕವರ್ನ ಸೀಲ್ ಹಾಕಿರಲಾಗುತ್ತದೆ. ಬಳಿಕ ಆಯಾ ಪರೀಕ್ಷಾ ಕೊಠಡಿಯ ಪ್ರಶ್ನೆ ಪತ್ರಿಕೆಗಳಿಗೆ ಕಾಗದದ ಕವರ್ನ ಜೊತೆಗೆ ಸೀಲ್ ಹಾಕಿರುತ್ತಾರೆ. ಕೊನೆಗೆ ಪ್ರತಿಯೊಂದು ಪ್ರಶ್ನೆ ಪತ್ರಿಕೆಗೂ ಪ್ರತ್ಯೇಕ ಸೀಲ್ ಇರುತ್ತದೆ. ಆದರೆ, ಪ್ರಶ್ನೆ ಪತ್ರಿಕೆಯ ಮೇಲಿನ ಸೀಲ್ ಓಪನ್ ಮಾಡಿ ಪುನಃ ಆಂಟಿಸಿದ್ದಾರೆಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ.
ಕೆಪಿಎಸ್‌ಸಿ ಸರಿಯಾಗಿ ಪರೀಕ್ಷೆ ನಡೆಸಿಲ್ಲವೆಂದು ಅಭ್ಯರ್ಥಿಗಳು ಆರೋಪ ಮಾಡಿದ್ದು, ಮರುಪರೀಕ್ಷೆ ನಡೆಸುವಂತೆ ಆಗ್ರಹಿಸಿದ್ದಾರೆ. ಈ ಕುರಿತು ಕೆಪಿಎಸ್‌ಸಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಿಗೆ ಮನವಿಯನ್ನೂ ಮಾಡಲಾಗಿದೆ . ಮರುಪರೀಕ್ಷೆ ಮಾಡಬೇಕೆಂದು ಹೋರಾಟ ನಡೆಸಲು ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘ ತೀರ್ಮಾನಿಸಿದೆ. ಜತೆಗೆ, ಸೀಲ್ ಓಪನ್ ಮಾಡಿರುವ ಬಗ್ಗೆ ತನಿಖೆ ಮಾಡುವಂತೆ ಆಗ್ರಹಿಸಿದೆ.
ಕೇವಲ ತುಮಕೂರಿನಲ್ಲಿ ಒಬ್ಬ ಅಭ್ಯರ್ಥಿ ಬ್ಲೂಟೂತ್ ಬಳಸಿಲ್ಲ, ಇದರ ಹಿಂದೆ ಒಂದು ದೊಡ್ಡ ಗ್ಯಾಂಗ್ ಇದೆ. ನಮಗೆಲ್ಲ ನೆನಪಿದೆ, ತಾವೇ ಮುಂದಾಳತ್ವ ವಹಿಸಿಕೊಂಡು PSI ಹಗರಣವನ್ನು ಬಯಲಿಗೆಳೆದು, ಅಕ್ರಮದ ಅಪರಾಧಿಗಳಿಗೆ ಜೈಲುಗಂಬಿ ಎಣಿಸಲಿಕ್ಕೆ ಹಚ್ಚಿದಿರಿ. PDO HK ಮತ್ತು NON HK ಪರೀಕ್ಷೆಯಲ್ಲಿ “ಬ್ಲೂಟೂತ್ ಬಳಕೆ”ಮತ್ತು “ಪ್ರಶ್ನೆ ಪತ್ರಿಕೆ ಸೋರಿಕೆ” ಆಗಿರುವುದು ಜಗಜ್ಜಾಹೀರವಾಗಿದೆ. ಬಡ ಅಭ್ಯರ್ಥಿಗಳು 5-6 ವರ್ಷದಿಂದ ಪರೀಕ್ಷೆಗೆ ಹಗಲು-ರಾತ್ರಿ ತಯಾರಿ ನಡೆಸಿದ್ದರು. ಅಕ್ರಮವಾಗಿ ಸರ್ಕಾರಿ ಹುದ್ದೆಗಳು ಮಾರಾಟವಾದರೆ, ಪ್ರತಿಭಾನ್ವಿತ ಬಡ ಅಭ್ಯರ್ಥಿಗಳ ಗತಿಯೇನು? ಇದಕ್ಕೆ ಉತ್ತರ ತಾವು ಕೊಡಬೇಕು. ಯುವಕರ ಕಣ್ಮಣಿ ನೀವು, ನಿಮ್ಮ ಮೇಲೆ ಲಕ್ಷಾಂತರ ಅಭ್ಯರ್ಥಿಗಳು ಭರವಸೆ ಇಟ್ಟಿದ್ದಾರೆ. ಇದಕ್ಕೆ ಪರಿಹಾರ ಹುಡಿಕಿ, ಅಕ್ರಮದಲ್ಲಿ ಭಾಗಿಯಾದ ಆರೋಪಿಗಳಿಗೆ ಜೈಲಿಗಟ್ಟಿಸಿ, “ಮರುಪರೀಕ್ಷೆ “ನಡೆಸುವಂತೆ KPSC ಗೆ ಅದೇಶಿಸಬೇಕೆಂದು AKSSA ಸಂಘಟನೆ ಪರವಾಗಿ ಕೇಳಿಕೊಳ್ಳುತ್ತೇವೆ ಎಂದು ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ (ರಿ) ವಿದ್ಯಾರ್ಥಿ ಘಟಕದ ಕಾಂತಕುಮಾರ್ ಆರ್ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿ ಆಗ್ರಹಿಸಿದ್ದಾರೆ.