ಆಟೋದಲ್ಲಿ ತೆರಳುತ್ತಿದ್ದ ಯುವತಿ ಮೇಲೆ ರೇಪ್ ಆಗಿದೆ. ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ.
ಮಧ್ಯರಾತ್ರಿ ಬೆಂಗಳೂರಿನ ಕೋರಮಂಗಲದ ಪಬ್‌ನಿಂದ ಪಾನಮತ್ತರಾಗಿ ಹೊರ ಬಂದಿದ್ದ ಯುವತಿ ತನ್ನ ದ್ವಿಚಕ್ರ ವಾಹನ ಓಡಿಸಿಕೊಂಡು ಮನೆಗೆ ತೆರಳುತ್ತಿದ್ದರು. ಈ ವೇಳೆ ವಾಹನ ಅಪಘಾತವಾಗಿದ್ದು ಯುವತಿ ವಾಹನ ಬಿಟ್ಟು ಆಟೋದಲ್ಲಿ ಪ್ರಯಾಣ ಬೆಳೆಸಿದ್ದರು. ಇದೇ ವೇಳೆ ಆಟೋ ಚಾಲಕ, ಯುವತಿಯ ಸ್ಥಿತಿ ಕಂಡು ದುರ್ಬಳಕೆ ಮಾಡಿಕೊಂಡಿದ್ದಾನೆ. ಆಟೋ ಹತ್ತಿದ್ದ ಯುವತಿಯನ್ನು ಬೊಮ್ಮನಹಳ್ಳಿ ಸಮೀಪದ ಗೋದಾಮು ಬಳಿ ಕರೆದುಕೊಂಡು ಹೋಗಿ ರೇಪ್ ಮಾಡಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಸದ್ಯ ಯುವತಿ ಹೆಬ್ಬಗೋಡಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ
ಸಂತ್ರಸ್ಥೆ ಅರೆ ಪ್ರಜ್ಞಾವಸ್ಥೆಯಲ್ಲಿ ತನ್ನ ಸ್ನೇಹಿತೆಗೆ ಕರೆ ಮಾಡಿದ್ದು ಸ್ನೇಹಿತೆ ಬಂದು ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾಳೆ. ಈ ವೇಳೆ ವೈದ್ಯರು ಯುವತಿಯನ್ನು ಪರೀಕ್ಷಿಸಿದಾಗ ಆಕೆಯ ಮೇಲೆ ಅತ್ಯಾಚಾರವಾಗಿರೋದು ಗೊತ್ತಾಗಿದೆ. ಆಸ್ಪತ್ರೆ ಸಿಬ್ಬಂದಿ ತಕ್ಷಣ ಹೆಬ್ಬಗೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದು ಘಟನೆ ಸಂಬಂಧ ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಇನ್ನು ಯುವತಿ ಬಿದ್ದಿದ್ದ ಸ್ಥಳ ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿದೆ. ಹೀಗಾಗಿ ಹೆಚ್ಎಸ್ಆರ್ ಲೇಔಟ್ ಗೆ ಹೆಬ್ಬಗೋಡಿ ಪೊಲೀಸರು ಮೆಮೋ ಕಳುಹಿಸಿದ್ದಾರೆ.