ಇಡೀ ರಾಜ್ಯ ರಾಜಕಾಣದಲ್ಲೇ ಅತ್ಯಂತ ದೊಡ್ಡ ಬ್ರೇಕಿಂಗ್ ಸುದ್ದಿಯಾಗಿದೆ. ರಾಜ್ಯದಲ್ಲಿ ಖಾಲಿಯಾದ ಮೂರು ವಿಧಾನಸಭಾ ಕ್ಷೇತ್ರಗಳ ಪೈಕಿ ಅತ್ಯಂತ ಕುತೂಹಲ ಹಾಗೂ ಭಾರಿ ಪೈಪೋಟಿಗೆ ಸಜ್ಜಾಗಿ ನಿಂತಿರುವ ಚನ್ನಪಟ್ಟಣದ ವಿಧಾನಸಭಾ ಕ್ಷೇತ್ರದಲ್ಲಿ ಕೇಂದ್ರ ಸಚಿವ, ಉಪ ಮುಖ್ಯಮಂತ್ರಿಗಳ ನಡುವೆ ಭಾರಿ ಪೈಪೋಟಿ ಶುರುವಾಗಿದೆ. ಇಲ್ಲಿ ಸ್ಪರ್ಧೆ ಮಾಡಲಿರುವ ಅಭ್ಯರ್ಥಿ ಬಗ್ಗೆ ತೀವ್ರ ಕುತೂಹಲ ಕೆರಳಿದ್ದು, ನಿಖಿಲ್ ಕುಮಾರಸ್ವಾಮಿ, ಸಿ.ಪಿ. ಯೋಗೇಶ್ವರ್ ಹೆರು ಕೇಳಿಬಂದಿತ್ತು. ಅದರೆ, ಇದೀಗ ಇವರಿಬ್ಬರನ್ನೂ ಬದಿಗಿರಿಸಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಮೈತ್ರಿ ಅಭ್ಯರ್ಥಿಯಾಗಲಿದ್ದಾರೆ ಎಂಬ ಸುಳಿವು ಲಭ್ಯವಾಗಿದೆ.
ಗೊಂಬೆ ನಾಡು ಚನ್ನಪಟ್ಟಣದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ 135 ಸ್ಥಾನ ಪಡೆದು ಬಹುಮತದಿಂದ ಅಧಿಕಾರಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಕೇವಲ ಶಾಸಕರಾಗಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸಂಸದರಾಗಿ ಆಯ್ಕೆ ಆಗಿದ್ದಾರೆ. ಇದರ ಬೆನ್ನಲ್ಲಿಯೇ ಕೇಂದ್ರದಲ್ಲಿ ಭಾರಿ ಕೈಗಾರಿಕಾ ಇಲಾಖೆಯ ಸಂಪುಟ ದರ್ಜೆ ಸಚಿವರಾಗಿದ್ದಾರೆ. ಇದರ ಬೆನ್ನಲ್ಲಿಯೇ ಚನ್ನಪಟ್ಟಣ ವಿಧಾನಸಭಾ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದು, ಇದೀಗ ಚನ್ನಪಟ್ಟಣ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಸಬೇಕಿದೆ.
ಉಪ ಚುನಾವಣೆಗೆ ಟಿಕೆಟ್‌ಗೆ ಭಾರಿ ಪೈಪೋಟಿ: ಚನ್ನಪಟ್ಟಣದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಥಳೀಯ ನಾಯಕ ಸಿ.ಪಿ. ಯೋಗೇಶ್ವರ್ ಅವರು ಬಿಜೆಪಿಯಿಂದ ಸ್ಪರ್ಧಿಸಿದರೆ, ಅವರ ವಿರುದ್ಧ ಜೆಡಿಎಸ್‌ನಿಂದ ಮಾಜಿ ಸಿಎಂ ಕುಮಾರಸ್ವಾಮಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆದರೆ, ಇದೀಗ ಲೋಕಸಭೆಯಲ್ಲಿ ಬಿಜೆಪಿ – ಜೆಡಿಸ್ ಮೈತ್ರಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿ ಸಂಸತ್ತಿಗೆ ಹೋಗಿದ್ದರಿಂದ ಚನ್ನಪಟ್ಟಣದ ಮೈತ್ರಿ ಟಿಕೆಟ್ ಅನ್ನು ಯಾರಿಗೆ ನೀಡಬೇಕು ಎಂಬ ಕುತೂಹಲ ಉಂಟಾಗಿದೆ. ಜೆಡಿಎಸ್ ಪಕ್ಷದಿಂದ ಗೆದ್ದ ಕ್ಷೇತ್ರವನ್ನು ಮೈತ್ರಿ ಧರ್ಮ ಪಾಲಿಸುವುದಕ್ಕಾಗಿ ಬಿಜೆಪಿಗೆ ಬಿಟ್ಟು ಕೊಡಲು ಒಪ್ಪುತ್ತಿಲ್ಲ. ಆದರೆ, ಇಲ್ಲಿ ಬಿಜೆಪಿ ನಾಯಕ ಸಿ.ಪಿ. ಯೋಗೇಶ್ವರ ಮೈತ್ರಿ ಟಿಕೆಟ್ ತನಗೇ ಕೊಡಬೇಕು ಎಂದು ಪಟ್ಟು ಹಿಡಿದಿದ್ದರು.
ಮೂರ್ನಾಲ್ಕು ಬಾರಿಗೆ ದೆಹಲಿಗೆ ಹೋಗಿದ್ದ ಯೋಗೇಶ್ವರ: ಹಾಲಿ ವಿಧಾನ ಪರಿಷತ್ ಸದಸ್ಯರೂ ಆಗಿರುವ ಸಿ.ಪಿ. ಚನ್ನಪಟ್ಟಣ ಉಪ ಚುನಾವಣೆಗೆ ಮೈತ್ರಿ ಟಿಕೆಟ್ ತನಗೇ ಬೇಕೆಂದು ಪಟ್ಟು ಹಿಡಿದಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಭೇಟಿ ಮಾಡಲು ಮೂರ್ನಾಲ್ಕು ಬಾರಿ ದೆಹಲಿಗೂ ಹೋಗಿ ಬಂದಿದ್ದಾರೆ. ಅಲ್ಲಿ ಜೆ.ಪಿ. ನಡ್ಡಾ, ರಾಜನಾಥ ಸಿಂಗ್, ಅಮಿತ್ ಶಾ ಸೇರಿದಂತೆ ರಾಜ್ಯದ ಹಲವು ಹಿರಿಯ ನಾಯಕರನ್ನು ಭೇಟಿ ಮಾಡಿ ಚರ್ಚಿಸಿ ಟಿಕೆಟ್‌ಗಾಗಿ ಲಾಬಿ ಮಾಡಿದ್ದಾರೆ. ಇದರ ಬೆನ್ನಲ್ಲಿಯೇ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಕೇಂದ್ರ ಬಿಜೆಪಿ ನಾಯಕರು ಒಂದೆರೆಡು ಸತ್ತಿನ ಮಾತುಕತೆಯನ್ನೂ ಮಾಡಿದ್ದಾರೆ. ಆದರೆ, ಈ ಸಭೆಯಲ್ಲಿ ಸಿ.ಪಿ. ಯೋಗೇಶ್ವರ್ ಅವರಿಗೆ ಮೈತ್ರಿ ಟಿಕೆಟ್ ಕೊಡುವುದಕ್ಕೆ ಹಿಂದೇಟು ಹಾಕಲಾಗಿದೆ. ಆದ್ದರಿಂದ ಇದೀಗ ಮಾಜಿ ಸಂಸದ ಪ್ರತಾಪ್ ಸಿಂಹಗೆ ಉಪ ಚುನಾವನೆ ಮೈತ್ರಿ ಟಿಕೆಟ್ ನೀಡಲು ನಿರ್ಧರಿಸಲಾಗಿದೆ ಎಂಬ ಸುಳಿವು ಸಿಕ್ಕಿದೆ.
ದೊಡ್ಡಗೌಡರಿಗೂ ಹತ್ತಿರವಾಗಿದ್ದ ಪ್ರತಾಪ್ ಸಿಂಹ:
ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ-ಜೆಡಿಸ್ ಮೈತ್ರಿ ಸುಳಿವು ಸಿಗುತ್ತಿದ್ದಂತೆಯೇ ಮೈಸೂರು-ಕೊಡಲು ಲೋಕಸಭಾ ಸಂಸದ ಪ್ರತಾಪ್ ಸಿಂಹ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಬಳಿ ಹೋಗಿ ಆಶೀರ್ವಾದ ಪಡೆದುಕೊಂಡು ಬಂದಿದ್ದರು. ಹೆಚ್.ಡಿ.ದೇವೇಗೌಡರು, ಕುಮಾರಸ್ವಾಮಿ, ಶಾಸಕ ಜಿ.ಟಿ. ದೇವೇಗೌಡ ಸೇರಿದಂತೆ ಹಲವು ಜೆಡಿಎಸ್ ನಾಯಕರೊಂದಿಗೆ ಪ್ರತಾಪ್‌ಸಿಂಹ ಉತ್ತಮ ಒಡನಾಟವನ್ನೂ ಹೊಂದಿದ್ದರು. ಆದರೆ, ಲೋಕಸಭಾ ಚುನಾವಣೆಗೆ ಪ್ರತಾಪ್ ಸಿಂಹ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿ ಮೈಸೂರು ಸಂಸ್ಥಾನದ ರಾಜ ಯದುವೀರ್ ಒಡೆಯರ್‌ಗೆ ಟಿಕೆಟ್ ನೀಡಿತ್ತು. ಆದರೂ ಜೆಡಿಎಸ್‌ನೊಂದಿಗೆ ಪ್ರತಾಪ್‌ಸಿಂಹ ಉತ್ತಮ ಒಡನಾಟವನ್ನೇ ಹೊಂದಿದ್ದಾರೆ. ಇದರ ಫಲವೇ ಇದೀಗ ಚನ್ನಪಟ್ಟಣದ ಮೈತ್ರಿ ಟಿಕೆಟ್ ಪ್ರತಾಪ್ ಸಿಂಹ ಪಾಲಾಗುತ್ತಿದೆ ಎಂಬ ಖಚಿತತೆಯನ್ನು ಹೆಚ್ಚು ಮಾಡುತ್ತಿದೆ.