ನಾಳೆಯಿಂದಲೇ (ಜೂನ್ 26) ನಂದಿನಿ ಹಾಲಿನ ದರ ಹೆಚ್ಚಳವಾಗಲಿದೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ತಿಳಿಸಿದ್ದಾರೆ. ನಂದಿನಿ ಹಾಲಿನ ದರ ಎಷ್ಟು ಹೆಚ್ಚಾಗಲಿದೆ ಎಂಬ ಮಾಹಿತಿ ಇಲ್ಲಿದೆ.
ರಾಜ್ಯದಲ್ಲಿ ಸದ್ಯಕ್ಕೆ ನಂದಿನಿ ಹಾಲಿನ ದರ ಏರಿಕೆ ಮಾಡುವ ಯಾವುದೇ ಚಿಂತನೆ ಸರ್ಕಾರದ ಮುಂದೆ ಇಲ್ಲ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್ ಕೆಲವು ತಿಂಗಳ ಹಿಂದೆ ಹೇಳಿದ್ದರು. ಆದರೆ, ಇದೀಗ ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ಹಾಲಿನ ದರ ಏರಿಕೆ ಮಾಡಲಾಗಿದೆ. ಇದು ಸಹಜವಾಗಿ ಮಧ್ಯಮ ವರ್ಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಲೋಕಸಭೆ ಚುನಾವಣೆ ಫಲಿತಾಂಶಕ್ಕೂ ಮುನ್ನ ಗುಜರಾತ್ನ ಅಮುಲ್ ಕಂಪನಿ ತನ್ನ ಎಲ್ಲ ರೀತಿಯ ಹಾಲಿನ ಬೆಲೆಯನ್ನು ಲೀಟರ್ಗೆ 2 ರೂ. ಹೆಚ್ಚಿಸಿತ್ತು. ಉತ್ಪಾದನೆಯ ಒಟ್ಟಾರೆ ವೆಚ್ಚದ ಹೆಚ್ಚಳದಿಂದಾಗಿ ಅಮುಲ್ ಹಾಲಿನ ಬೆಲೆಯನ್ನು ಹೆಚ್ಚಿಸಲಾಗಿದೆ ಎಂದು ಗುಜರಾತ್ ಸಹಕಾರಿ ಹಾಕು ಮಾರುಕಟ್ಟೆ ಒಕ್ಕೂಟ ತಿಳಿಸಿತ್ತು.
ಅಮುಲ್ ಕಂಪನಿಯ ಹಾಲಿನ ದರ ಏರಿಕೆ ರಾಜ್ಯದ ಜನರಿಗೆ ಅಷ್ಟೊಂದು ಪರಿಣಾಮ ಬೀರಿಲ್ಲ. ಆದರೆ ಕೆಎಂಎಫ್ನ ನಂದಿನಿ ಹಾಲಿನ ದರ ಏರಿಕೆ ರಾಜ್ಯದ ಜನರಿಗೆ ಬಿಸಿ ತುಪ್ಪವಾಗಿದೆ. ಇತ್ತೀಚಿಗಷ್ಟೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಿದ್ದ ರಾಜ್ಯ ಸರ್ಕಾರ ಇದೀಗ, ಹಾಲಿನ ದರ ಏರಿಸಿದ್ದು,ರಾಜ್ಯದ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.